Posts

100 ಬಸವಣ್ಣನ ವಚನಗಳು

 ೧. ಉದಕದೊಳಗೆ ಬೈಚಿಟ್ಟ ಬೈಕೆಯ ಕಿಚ್ಚಿನಂತೆ ಇದ್ದಿತ್ತು; ಸಸಿಯೊಳಗಣ ರಸದ ರುಚಿಯಂತೆ ಇದ್ದಿತ್ತು; ನನೆಯೊಳಗಣ ಪರಿಮಳದಂತೆ ಇದ್ದಿತ್ತು; ಕೂಡಲಸಂಗಮದೇವರ ನಿಲವು ಕನ್ನೆಯ ಸ್ನೇಹದಂತೆ ಇದ್ದಿತ್ತು. ೨. ಕಾಳಿಯ ಕಂಕಾಳದಿಂದ ಮುನ್ನ ತ್ರಿಪುರ ಸಂಹಾರದಿಂದ ಮುನ್ನ ಹರಿವಿರಿಂಚಿಗಳಿಂದ ಮುನ್ನ ಉಮೆಯ ಕಲ್ಯಾಣದಿಂದ ಮುನ್ನ ಮುನ್ನ, ಮುನ್ನ, ಮುನ್ನ, ಅಂದಂದಿಗೆ ಎಳೆಯ ನೀನು, ಹಳೆಯ ನಾನು ಮಹಾದಾನಿ ಕೂಡಲಸಂಗಮದೇವ. ೩. ಅಯ್ಯಾ, ನೀನು ನಿರಾಕಾರವಾದಲ್ಲಿ ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ. ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ. ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ. ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು ಜಂಗಮಲಾಂಛನವಾಗಿ ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ.  ೪. ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ! ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ! ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಕೂಡಲಸಂಗಮದೇವ. ೫. ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಿದೆ ನೋಡಾ! ಸಂಸಾರಸಾಗರ ಉರದುದ್ದವೇ ಹೇಳಾ ? ಸಂಸಾರಸಾಗರ ಕೊರಲುದ್ದವೇ ಹೇಳಾ ? ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ? ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ! ಕೂಡಲ